ಮಾರ್ಲೊ, ಕ್ರಿಸ್ಟಫರ್
1584 - 93. ಇಂಗ್ಲಿಷ್ ಕವಿ ಹಾಗೂ ನಾಟಕಕಾರ. ಯೂನಿವರ್ಸಿಟಿ ವಿಟ್ಸ್ ಎಂದು ಹೆಸರಾಗಿದ್ದ ನಾಟಕಕಾರರಲ್ಲಿ ಈತನೂ ಒಬ್ಬ. ಇಂಗ್ಲಿಷ್ ರುದ್ರನಾಟಕ ಹಾಗೂ ಸರಳ ರಗಳೆ ಛಂದಸ್ಸಿನ ಕಾವ್ಯರಚನೆಯ ಪ್ರವರ್ತಕ.

1564 ಫೆಬ್ರವರಿ 6ರಂದು ಕ್ಯಾಂಟರ್ಬರಿಯಲ್ಲಿ ಹುಟ್ಟಿದ. ತಂದೆ ಜಾನ್ ಮಾರ್ಲೊ ಪಾದರಕ್ಷೆಗಳನ್ನು ಮಾಡುವ ವೃತ್ತಿಯವ. ತಾಯಿ ಕ್ಯಾಥರಿನ್ ಆರ್ಥರ್ ಪಾದ್ರಿಯೊಬ್ಬನ ಮಗಳು.

ಈತ ಕ್ಯಾಂಟರ್ಬರಿ ಕಿಂಗ್ಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಬಳಿಕ 1580 ರಲ್ಲಿ ಕೇಂಬ್ರಿಜ್ ಬೆನೆಟ್ (ಕಾರ್ಪಸ್ ಕ್ರಿಸ್ಟಿ) ಸೇರಿ ಬಿ.ಎ. ಪದವೀಧರನಾದ (1584). ಎಲಿಜಬೆತ್ ರಾಣಿ ಪ್ರಿವಿ ಕೌನ್ಸಿಲ್ ಮೂಲಕ ಕೊಟ್ಟ ಸೂಚನೆಯಂತೆ ಕೇಂಬ್ರಿಜ್ ವಿಶ್ವವಿದ್ಯಾಲಯ ವಿಳಂಬ ಮಾಡದೆ ಈತನಿಗೆ ಎ.ಎ. ಪದವಿ ನೀಡಿತು (1587).

1589ರ ವೇಳೆಗೆ ಮಾರ್ಲೊ ಲಂಡನ್ನಿನಲ್ಲಿ ನೆಲೆಸಿದ್ದ ಓವಿಡ್ ಕವಿಯ ಅಮೋರೆಸ್ ಕಾವ್ಯವನ್ನು ಇಂಗ್ಲಿಷಿಗೆ ಅನುವಾದ ಮಾಡುವುದರೊಂದಿಗೆ ಸಾಹಿತ್ಯ ರಚನೆ ಆರಂಭಿಸಿದ. ಲಾರ್ಡ್ ಅಡ್ಮಿರಲ್‍ನ ನಾಟಕ ಕಂಪನಿಯ ನಿಯಮಿತ ನಾಟಕಕಾರನಾಗಿ ಪ್ರಚಲಿತವಿದ್ದ ನಾಟಕಗಳನ್ನು ತಿದ್ದಿ ಪ್ರತಿ ಮಾಡಿಕೊಡುತ್ತಿದ್ದುದಲ್ಲದೆ ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನೂ ವಹಿಸುತ್ತಿದ್ದ. ಆಗ ಇಂಗ್ಲೆಂಡಿನಲ್ಲಿ ನಾಟಕ ಅತ್ಯಂತ ಜನಪ್ರಿಯವಾಗುತ್ತಿದ್ದ ಕಾಲ. ವಿಶ್ವವಿದ್ಯಾಲಯದ ಬುದ್ಧಿವಂತರು ಎನಿಸಿಕೊಂಡವರು ನಾಟಕಗಳನ್ನು ರಚಿಸುತ್ತಿದ್ದ ಕಾಲವದು. ಆ ನಾಟಕಕಾರರ ಗುಂಪಿಗೆ ಮಾರ್ಲೊ ಸಹ ಸೇರಿ ಗಣ್ಯನೆನಿಸಿಕೊಂಡ. ರುದ್ರ ಅಥವಾ ದುರಂತ ನಾಟಕಗಳ ರಚನೆಯ ಕಡೆ ಈತನ ಮನಸ್ಸು ಒಲಿಯಿತು. ಮೊಟ್ಟಮೊದಲ ನಾಟಕ ಟ್ಯಾಂಬರ್ಲೇಸ್ ದಿ ಗ್ರೇಟ್ ಒಂದು ಅಸಾಧಾರಣ ಕೃತಿ. ಮೆಂಗೋಲ್ ಸಮ್ರಾಟನಾಗುವ ಕನಸು ಕಂಡ ಮಹತ್ವಾಕಾಂಕ್ಷಿ. ಇತಿಹಾಸ ಪ್ರಸಿದ್ಧ ತೈಮೂರ್ ಲಂಗ್‍ನ ಸಾಹಸ ಜೈತ್ರಯಾತ್ರೆಗಳ ಕಥೆ ಈ ನಾಟಕದ ವಸ್ತು. ಇದರಲ್ಲಿ ಬಳಸಿದ ಕಾವ್ಯ ಛಂದಸ್ಸು ಮುಂದೆ ಸರಳರಗಳೆ ಎಂದು ಪ್ರಸಿದ್ಧವಾಗಿ ಷೇಕ್ಸ್‍ಪಿಯರ್ ತನ್ನ ನಾಟಕಗಳಲ್ಲಿ, ಮಿಲ್ಟನ್ ತನ್ನ ಕಾವ್ಯದಲ್ಲಿ ಬಳಸಿದ ಛಂದೋ ಪರಂಪರೆಗೆ ನಾಂದಿಯಾಯಿತು. ಮಾರ್ಗ ಸಂಪ್ರದಾಯದ ಸಾಹಿತ್ಯ ವಿಮರ್ಶಕರು ಈ ಯುವ ಸಾಹಿತಿಯ ಹೊಸ ಛಂದೋ ಪ್ರಯೋಗವನ್ನು ಕಟುವಾಗಿ ಟೀಕಿಸಿದರು. ಹುರುಳಿಲ್ಲದ ಶಬ್ದಾಡಂಬರ ಎಂದು ಲೇವಡಿ ಮಾಡಿದರು. ಮಾರ್ಲೊನ ಈ ಧೀರ ಶೈಲಿಯ ಗಂಭೀರತೆಗೆ ರೋಮಾಂಚಿತರಾದ ಫೀಲ್, ಗ್ರೀನ್, ಕಿಡ್ ಮುಂತಾದ ಮಿತ್ರರು ತೆರೆದ ಹೃದಯದಿಂದ ಈ ಹೊಸ ಪ್ರಯೋಗವನ್ನು ಬೆಂಬಲಿಸಿ ಸಮರ್ಥಿಸಿದರು. 

ಮಾರ್ಲೊನ ಮತ್ತೊಂದು ಯಶಸ್ವೀ ರುದ್ರನಾಟಕ ದಿ ಟ್ರ್ಯಾಜಿಕಲ್ ಹಿಸ್ಟರಿ ಆಫ್ ಡಾಕ್ಟರ್ ಫೌಸ್ಟ್‍ಸ್. ಇದಾದ ಮೇಲೆ ದಿ ಫೇಮಸ್ ಟ್ರ್ಯಾಜಿಡಿ ಆಫ್ ದಿ ರಿಚ್ ಜ್ಯೂ ಆಫ್ ಮಾಲ್ಟಾ (1589) ಎಂಬ ನಾಟಕ ಬಂದಿತು. ಇವು ಮೂರು ರೊಮ್ಯಾಂಟಿಕ್ ಸಂಪ್ರದಾಯದ ರುದ್ರನಾಟಕಗಳ ಅನಂತರ ದಿ ಟ್ರಬಲ್‍ಸಮ್ ರ್ಹೆನ್ ಅಂಡ್ ಲ್ಯಾಮೆಂಟಬಲ್ ಡೆತ್ ಆಫ್ ಎಡ್ವರ್ಸ್ ದಿ ಸೆಕೆಂಡ್ ಎಂಬ ನಾಟಕ ಬರೆದ. ಇದೇ ಮೊದಲ ಇಂಗ್ಲೀಷ್ ಐತಿಹಾಸಿಕ ನಾಟಕ. ವಾಸ್ತವ ಘಟನೆಗಳನ್ನು ಆಧರಿಸಿಯೇ ಬರೆದಿದ್ದರೂ ಈ ಮುಂಚೆ ಪರಿಚಿತವಾಗಿದ್ದ ವೃತ್ತಾಂತ ನಾಟಕಗಳನ್ನು ಮಾದರಿಂದ ಇದು ಭಿನ್ನವಾದುದು. ನಾಟಕದ ಉದ್ದಕ್ಕೂ ಮಾರ್ಲೊನ ಪ್ರತಿಭೆ ಮಿಂಚುತ್ತದೆ. ದಿ ಮ್ಯಾಸ್ಸಕರ್ ಅಟ್ ಪ್ಯಾರಿಸ್ (1593) ಇನ್ನೊಂದು ಐತಿಹಾಸಿಕ ನಾಟಕ. ಸಮಕಾಲೀನ ಫ್ರೆಂಚ್ ಐತಿಹಾಸಿಕ ಘಟನೆಗಳನ್ನು ಕುರಿತದ್ದು. ಇದರ ಅನಂತರ ದಿ ಟ್ರಾಜಿಡಿ ಆಫ್ ಡಿಡೊ, ಕ್ವೀನ್ ಆಫ್ ಕಾರ್ಥೇಜ್ ಎಂಬ ನಾಟಕವನ್ನು ಥಾಮಸ್ ನ್ಯಾಷ್‍ನ ಒಡಗೂಡಿ ಬರೆದ. ಈ ನಾಟಕವೇ ಕೊನೆಯದು (1594). ಈ ನಾಟಕ ಮತ್ತು ಹಿರೋ ಅಂಡ್ ಲಿಯಾಂಡರ್ ಎಂಬ ಕವನ ಮಾರ್ಲೊನ ಅಕಾಲ ಮರಣದಿಂದಾಗಿ ಅಪೂರ್ಣವಾಗಿ ಉಳಿದವು. ನಾಟಕವನ್ನು ನ್ಯಾಷ್ ಪೂರ್ಣಗೊಳಿಸಿದ. ಕವನವನ್ನು ಹಾಫ್‍ಮನ್ ಪೂರ್ತಿ ಮಾಡಿದ. ಆದರೆ ಇದು ಅನಗತ್ಯವಾಗಿತ್ತು. ಈ ಕವನ ಲುಕಾನ್ ಮತ್ತು ಓವಿಡ್‍ರ ಕೃತಿಗಳ ಭಾಷಾಂತರ ಅಷ್ಟೇ.

1593ರ ಮೇ 30 ರಂದು ಡೆಪ್ಟ್‍ಫರ್ಡಿನ ಪ್ರವಾಸಿ ಮಂದಿರಗಳಲ್ಲಿ ಉಂಟಾದ ಜಗಳ ಮಾರ್ಲೊನ ಹತ್ಯೆಯಲ್ಲಿ ಪರ್ಯವಸಾನ ಗೊಂಡಿತು. ಮಾರ್ಲೊ ಸಾವು ನಿಗೂಢವಾಗೇ ಉಳಿಯಿತು. ಅನೇಕ ಊಹಾಪೋಹಗಳಿಂದ ಎಲಿಜಬೆತ್ ಕಾಲದಲ್ಲಿ ಸಾಮಾನ್ಯವಾಗಿದ್ದ ರೋಚಕ ಕಥೆಗಳು ಹುಟ್ಟಿಕೊಂಡವು. ಇದೊಂದು ರಾಜಕೀಯ ಹತ್ಯೆ ಎಂಬ ಕತೆಯೂ ಹುಟ್ಟಿತು. ವಾಸ್ತವವಾಗಿ ಏನಾಯಿತು ಎಂಬುದೇ ಖಚಿತವಾಗಿ ಸ್ಥಿರಪಟ್ಟಿಲ್ಲ

ಈತನ ಸಮಗ್ರ ಸಾಹಿತ್ಯ ರಚನೆ ಕೇವಲ ನಾಲ್ಕು ವರ್ಷಗಳ ಅವಧಿಯದು. ಈತ ಅಸಾಧಾರಣದ ಪ್ರತಿಭಾಶಾಲಿ ಎಂಬುದನ್ನು ಈತನ ಕೃತಿಗಳು ಸ್ಪಷ್ಟಪಡಿಸುತ್ತವೆ. 
`ಟ್ಯಾಂಬುರ್‍ಲೇನ್` ಮೊದಲಿಗೆ ಈಗ ಒಂದನೆಯ ಭಾಗ ಎಂದು ಕರೆಯುವ ಕಥಾವಸ್ತುವಿಗೆ ಮಾತ್ರ ಸೀಮಿತವಾಗಿತ್ತು. ಸಿಥಿಯನ್ ಕುರುಬನಾಯಕನ ಮಗ ತೈಮೂರ್ ಪರಾಕ್ರಮ, ವಾಕ್ಪಟುತ್ವಗಳಿಂದ ಸ್ಫೂರ್ತಿದಾಯಕ ನಾಯಕನಾಗಿ ಇಡೀ ಜಗತ್ತನ್ನು ಗೆಲ್ಲಲು ಹೊರಡುತ್ತಾನೆ. ತುರ್ಕಿ, ಪರ್ಷಿಯಾ, ಈಜಿಪ್ಟ್‍ಗಳನ್ನು ಸೋಲಿಸಿ ಅಜೇಯನೆನಿಸಿಕೊಳ್ಳುತ್ತಾನೆ. ಮಹತ್ತ್ವಾಕಾಂಕ್ಷಿಯಾಗಿ ಅತ್ಯಂತ ಕ್ರೂರಿಯಾಗಿ ಚಿತ್ರಿತನಾಗಿರುವ ಈತನ ಮಾನವೀಯ ಮಾರ್ದವತೆ ನಡೆಸುವ ಈಜಿಪ್ಟ್ ರಾಜಕುವರಿ ಜೆನೋಕ್ರೇಟಳನ್ನು ಪ್ರೀತಿಸಿ ಮದುವೆಯಾಗಿ ನಡೆಸುವ ದಾಂಪತ್ಯ ಜೀವನದಲ್ಲಿ ವ್ಯಕ್ತವಾಗುತ್ತದೆ. ತನ್ನ ಮನೋರಥಗಳೆಲ್ಲ ಈಡೇರಿದರೂ ಅತೃಪ್ತಿ, ಅಶಾಂತಿ ನೆಲೆಯಲ್ಲಿ ನಾಟಕ ಮುಗಿಯುತ್ತದೆ. ನಾಟಕ ಜನಪ್ರಿಯವಾಗಿ ಮಾರ್ಲೊ ಎರಡನೆಯ ಭಾಗವನ್ನು ರಚಿಸಿದ. ಅದರಲ್ಲಿ ಮತ್ತಷ್ಟು ಸೋಲರಿಯದ ಯುದ್ಧಗಳಲ್ಲಿ ಎಗ್ಗಿಲ್ಲದ ರಕ್ತದ ಹೊಳೆಯಲ್ಲಿ ತೈಮೂರ್‍ನ ವ್ಯಕ್ತಿತ್ವ ಚಿತ್ರಣಕ್ಕೆ ನಾಟಕಕಾರ ತೊಡಗುತ್ತಾನೆ. ಅಧಿಕಾರ, ಸಂಪತ್ತು, ದಿಗ್ವಿಜಯ, ಸೌಂದರ್ಯರಾಶಿಗಳ ಮಧ್ಯೆ ಅರಿವುಗಳಲ್ಲಿ ತೈಮೂರ್ ಒದ್ದಾಡುತ್ತಾನೆ. ವೃದ್ಧಾಪ್ಯ, ಅನಾರೋಗ್ಯ, ಕೌಟುಂಬಿಕ ದುಃಖ (ಹೆಂಡತಿ ಸತ್ತು ಮಕ್ಕಳು ಅಯೋಗ್ಯರಾಗಿ) ಕಿತ್ತು ತಿನ್ನುವಾಗ ಕೊಲೆ ಸುಲಿಗೆ, ರಕ್ತಪಾತ, ಎಣೆಯಿಲ್ಲದ ಕ್ರೌರ್ಯ ಹಿಂಸಾಚಾರಗಳಲ್ಲೇ ಕಳೆದ ಜೀವಮಾನದ ಅರ್ಥಹೀನತೆ ಎದುರಾಗಿ ಅಪ್ಪಳಿಸುತ್ತದೆ. ಬಾಳು ದುರಂತವಾಗುತ್ತದೆ.

ಡಾಕ್ಟರ್ ಫೌಸ್ಟಸ್ ಮಧ್ಯಯುಗದ ನೈತಿಕ ನಾಟಕಗಳ ಚೌಕಟ್ಟಿನಲ್ಲಿ ಬರುತ್ತದೆ. ಪ್ರಲೋಭನೆ, ನೈತಿಕಪತನ ಮತ್ತು ಶಿಕ್ಷೆ ಇದರ ವಸ್ತು. ಜ್ಯೂ ಆಫ್ ಮಾಲ್ಟಾದಲ್ಲಿ ಸಮಕಾಲೀನಸಮಾಜದ ಪ್ರತಿಫಲನವನ್ನು ಕಾಣುತ್ತೇವೆ. ಸ್ವಾರ್ತಿ ಹಾಗೂ ಅಧಿಕಾರದಾಹದ ಬರಾಬ್ಬಾಸ್ ಕಥಾನಾಯಕ. ಕ್ರೈಸ್ತಸಮಾಜದಲ್ಲಿದ್ದೂ ತಲೆಯೆತ್ತಿ ಸ್ವಾರ್ಥ ಸಾಧಿಸಿಕೊಂಡ ಜ್ಯೂ. ತೈಮೂರ್, ಡಾಕ್ಟರ್ ಫೌಸ್ಟಸ್, ಬರಾಬ್ಬಾಸ್ ರಂತೆಯೇ ಎರಡನೆಯ ಎಡ್ವರ್ಡ್ ಸಹ ಮಹತ್ತ್ವಾಕಾಂಕ್ಷಿಯಾಗಿ ಕೇಡಿಗ ಬುದ್ಧಿಯವನಾಗಿ ಚಿತ್ರಿತನಾಗಿದ್ದಾನೆ. ಅವನಲ್ಲೂ ಅಧಿಕಾರದಾಹ ಕಾಣುತ್ತದೆ. ಅಧಿಕಾರ ಬಂದಮೇಲೆ ಭ್ರಷ್ಟಾಚಾರ ಇನ್ನೂ ಹೆಚ್ಚಾಗುತ್ತದೆ. ಸಾಮಾಜಿಕಹೊಣೆ ಮುಗಿಯುತ್ತದೆ. ತತ್ತ್ವನಿಷ್ಠರ ಸ್ವತಂತ್ರ ವಿಚಾರಗಳು, ಹಿತವಚನ ಅಪ್ರಿಯವಾಗುತ್ತವೆ. ನೀತಿಯನ್ನು ಗಾಳಿಗೆ ತೂರಿ ಭೋಗ ಜೀವನದಲ್ಲಿ ಮುಳುಗುವ ವ್ಯಕ್ತಿಯ ಬಾಳು ದುರಂತವಾಗಿ ಪರಿಣಮಿಸುತ್ತದೆ. ವ್ಯಕ್ತಿಗೂ ಯಾತನ ಸಮಾಜಕ್ಕೂ ಕೇಡು. ಇದು ನಾಟಕ ಅಭಿವ್ಯಕ್ತಿಸುವ ಸಂದೇಶ, ಎರಡನೆಯ ಎಡ್ವರ್ಡ್ ನಾಟಕವೊಂದೇ ಅನ್ಯ ಹಸ್ತಕ್ಷೇಪವಿಲ್ಲದೆ ಪೂರ್ಣವಾಗಿ ಮಾರ್ಲೊನ ಶುದ್ಧ ಬರಹವಾಗಿ ಉಳಿದಿವೆ. ಇಲ್ಲಿಯ ಪಾತ್ರಗಳ ಚಿತ್ರಣ ಪೋಷಣೆ ಚೆನ್ನಾಗಿದೆ. 

ಮಾರ್ಲೊನ ನಾಟಕಗಳಲ್ಲಿ ನಾಟಕಾಂಶ ರಚನಾ ಕೌಶಲಗಳಿಗಿಂತ ಕಾವ್ಯ ಪ್ರತಿಭೆಯೇ ಹೆಚ್ಚು. ಶ್ರೇಷ್ಠ ನಾಟಕ ರಚನೆಯ ನಿದರ್ಶನವಾಗಿರುವ ಎರಡನೆಯ ಎಡ್ವರ್ಸ್ ನಾಟಕವೊಂದೇ ಇದಕ್ಕೆ ಅಪವಾದ. ಮಾರ್ಲೊ ಇಂಗ್ಲಿಷ್ ವಿಶಿಷ್ಟ ರೂಪದ ರುದ್ರನಾಟಕಗಳ ಮತ್ತು ಐತಿಹಾಸಿಕ ನಾಟಕಗಳ ಅದ್ಯಪ್ರವರ್ತಕನಾದರೂ ಅವನ ನಾಟಕಗಳಲ್ಲಿ ಹಲವಾರು ಲೋಪದೋಷಗಳಿವೆ. ಒಂದೇ ಪಾತ್ರ (ನಾಯಕನ ಪಾತ್ರ) ಪ್ರಧಾನವಾಗಿ ನಿಂತು ಉಳಿದ ಪಾತ್ರಗಳು ಅದರ ಸುತ್ತ ಸುತ್ತುವ ಛಾಯೆಗಳಾಗಿಬಿಡುತ್ತವೆ. ಅವುಗಳಿಗೆ ಪುಷ್ಟಿಯಾಗಲಿ, ಜೀವಂತಿಕೆಯಾಗಲಿ ಇಲ್ಲ. ಸ್ಮರಣೆಯಲ್ಲಿ ನಿಲ್ಲಬಲ್ಲ ಒಂದಾದರೂ ಸ್ತ್ರೀಪಾತ್ರ ಸಹ ಇಲ್ಲ. ಬೀಭತ್ಸ ಭಯಾನಕ ಸನ್ನಿವೇಶಗಳೇ ಹೆಚ್ಚು. ಹರ್ಷದಹೊಂಬಿಸಿಲೇ ಇಲ್ಲ. ಹಾಸ್ಯವಾದರೂ ತೀರ ವಿಕೃತ ಇಲ್ಲವೇ ಕೀಳು ಮಟ್ಟದ್ದು. ಮಾರ್ಲೊನ ಕಾವ್ಯಗಳು ಶ್ರೇಷ್ಠವಾದುದು. ಭಾಷೆ, ಛಂದಸ್ಸು, ಮೋಹಕವಾದ ಪದ ಪ್ರಯೋಗಗಳಲ್ಲಿ ಅದ್ಭುತವಾದ ಹಿಡಿತವಿರುವುದನ್ನು ಕಾಣಬಹುದು.								
(ಕೆ.ಬಿ.ಪಿ.)
	ಮಾರ್ಲೊನ ನಾಟಕಗಳ ಮಿತಿಗಳನ್ನು ದೋಷಗಳನ್ನು ಗುರುತಿಸಿದ ನಂತರವು ಅವನ ಸಾಧನೆ ಮೆಚ್ಚುಗೆ ಗಳಿಸುತ್ತದೆ. ಆತನ `ಡಾ. ಫೌಸ್ಟಸ್ ಷೇಕ್ಸ್‍ಪಿಯರನ `ಮೆಕಬೆತ್ ನಾಟಕದ ಮೋಡಿ, `ಎಡ್ವರ್ಡ್ ದಿ ಸೆಕೆಂಡ್ ಷೇಕ್ಸ್‍ಪಿಯರ್‍ನ `ರಿಚರ್ಡ್ ದಿ ಸೆಕೆಂಡ್ ನಾಟಕದ ಮೇಲೆ, ಅವನ ಬಾರಬಾಸ್ ಪಾತ್ರಸೃಷ್ಟಿ ಷೇಕ್ಸ್‍ಪಿಯರನ ಷೈಲಾಕ್ ಪಾತ್ರ ಸೃಷ್ಟಿಯ ಮೇಲೆ, ಪ್ರಭಾವ ಬೀರಿದವು. ದುರಂತ (ಟ್ರ್ಯಾಜಿಡಿ) ಎಂದರೆ ಮಧ್ವಯುಗದ ಕಲ್ಪನೆ, ಹಿರಿಯ ಸ್ಥಾನ ಮತ್ತು ಭಾಗಗಳ ನಷ್ಟ. ಈ ಪರಿಕಲ್ಪನೆಗೆ ವ್ಯಕ್ತಿಯ ಸ್ವಭಾವ ಮತ್ತು ಆಯ್ಕೆಗಳಲ್ಲಿ ಬೇರುಗಳನ್ನಿತ್ತವನು. ಮಾರ್ಲೊ ನಾಯಕನ ಮನಸ್ಸಿನ ಹೊಯ್ದಾಟ, ಯಾತನೆಗಳಿಗೆ ಪ್ರಾಧಾನ್ಯ ನೀಡಿದ. ಮನುಷ್ಯನ ಹೊಣೆಗೆ ಪ್ರಾಧಾನ್ಯ ನೀಡಿದ ಹೊರಜಗತ್ತಿನಲ್ಲಿ ಆಗಬಹುದಾದ ನಷ್ಟಕ್ಕಿಂತ ಮನುಷ್ಯ ಮಾಡಿದ ಆಯ್ಕೆಯಿಂದ ತನ್ನೊಳಗೆ ಸೃಷ್ಟಿಸಿಕೊಳ್ಳುವ ನರಕದ ದರ್ಶನವನ್ನು ಮಾಡಿಸಿದ ವ್ಯಕ್ತಿಯ ಹೊರಗಡೆಯ ಶಕ್ತಿಗಳು, ಒಳಗಿನ ಪ್ರವೃತ್ತಿ, ಶಕ್ತಿಗಳು ಎರಡನ್ನೂ ಇವನ ನಾಟಕಗಳು ಸೂಚಿಸುತ್ತವೆ. ಹೀಗೆ ದುರಂತ ನಾಟಕದ ಪರಿಕಲ್ಪನೆ, ದುರಂತ ನಾಯಕನ ಪರಿಕಲ್ಪನೆ ಎರಡೂ ಇಂಗ್ಲಿಷ್ ನಾಟಕದಲ್ಲಿ ರೂಪುಗೊಳ್ಳುವುದರಲ್ಲಿ ಇವನ ಪಾತ್ರ ಹಿರಿದು. ಇಂಥ ನಾಟಕಕ್ಕೆ ಅಗತ್ಯವಾದ ಮಾಧ್ಯಮವನ್ನು ಸೃಷ್ಟಿಷಿದ, ಬ್ಯಾಂಕ್ ಪರ್ಸ್ ಅನ್ನು ರೂಪಿಸಿ, ಇವನ ಬ್ಯಾಂಕ್ ಪರ್ಸಿಗೆ ಷೇಕ್ಸ್‍ಪಿಯರ್‍ನ ಬ್ಯಾಂಕ್ ಪರ್ಸ್‍ನ ವ್ಯಾಪ್ತಿ ಮತ್ತು ಆದರೆ ಅದರಲ್ಲಿ ಶಕ್ತಿ ತುಂಬಿ ತುಳುಕುತ್ತದೆ.
(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ